ಓಮು: ಅಂಬೆಲಿಫೆರಿ ಕುಟುಂಬಕ್ಕೆ ಸೇರಿದ ಟ್ರಾಕಿಸ್ಪರ್ಮಮ್ ಕಾಪ್ಟಿಕಮ್ ಎಂಬ ಏಕವಾರ್ಷಿಕ ಪ್ರಭೇದ. ಈಜಿಪ್ಟಿನ ಮೂಲವಾಸಿಯಾದ ಈ ಗಿಡವನ್ನು ಬೀಜಗಳಿಗಾಗಿ ಇರಾಕ್, ಇರಾನ್, ಆಫ್ಘಾನಿಸ್ಥಾನ ಹಾಗು ಭಾರತದಲ್ಲಿ ಬೆಳೆಸುತ್ತಿದ್ದಾರೆ. ವಾದಕ್ಕಿ, ಓಮಕ್ಕಿ ಅಥವಾ ಅಜ್ವಾನ ಪರ್ಯಾಯನಾಮಗಳು. ಇದರ ಬೀಜಗಳನ್ನು ಸಂಬಾರ ಪದಾರ್ಥವಾಗಿಯೂ ಔಷಧಿಯಾಗಿಯೂ ಬಳಸುತ್ತಾರೆ. ಭಾರತದಲ್ಲಿ ಸು. 1 ಲಕ್ಷ ಎಕರೆಗಳಲ್ಲಿ ಇದರ ಸಾಗುವಳಿಯಾಗುತ್ತಿದೆ. ಓಮಿನ ಅಧಿಕ ಉತ್ಪನ್ನ ಬಂಗಾಳ ಹಾಗೂ ರಾಜಾಸ್ಥಾನಗಳಲ್ಲಿ, ಸಾಮಾನ್ಯವಾಗಿ ಬಂiÀÄಲು ಹಾಗೂ ತಗ್ಗು ಪ್ರದೇಶದ ಬೆಳೆಯಾದರೂ ಎತ್ತರದ ಪ್ರದೇಶಗಳಲ್ಲೂ ಇದನ್ನು ಬೆಳೆಸಬಹುದು.

ಇದು 2-3 ಅಡಿಗಳ ಎತ್ತರಕ್ಕೆ ಬೆಳೆಯುವುದು. ಕಾಂಡ ನುಣುಪು ಮತ್ತು ಬೂದು ಮಿಶ್ರಿತ ಹಸಿರು ಬಣ್ಣದ್ದು. ವಿರಳವಾಗಿ ಪರ್ಯಾಯವಾಗಿ ಜೋಡಣೆಗೊಂಡಿರುವ ಎಲೆಗಳು ಪುನಸ್ಸಂಯುಕ್ತವಾಗಿ ವಿಭಜನೆ ಹೊಂದಿವೆ. ಹೂಗಳು ಅಚ್ಚ ಬಿಳಿಯವೂ ಬಹಳ ಚಿಕ್ಕವೂ ಆಗಿದ್ದು ಸಂಯುಕ್ತ ಅಂಬೆಲ್ ಹೂ ಗೊಂಚಲುಗಳಲ್ಲಿ ಇರುತ್ತವೆ. ಪುಷ್ಪದಳಗಳು ಮತ್ತು ಕೇಸರಗಳು ಐದೈದು ಇವೆ. ಅಂಡಾಶಯ ನೀಚಸ್ಥಾನದಲ್ಲಿದ್ದು ಎರಡು ಕಾರ್ಪೆಲ್ಗಳಿಂದ ಕೂಡಿದೆ. ಕಾಯಿಗಳು ಬಹಳ ಸಣ್ಣ ಮತ್ತು ಒಂದೊಂದರಲ್ಲಿಯೂ ಎರಡು ಪುಟ್ಟ ಬೀಜಗಳಿವೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ (ಅಕ್ಟೋಬರ್ ಅಥವಾ ನವೆಂಬರ್ ತಿಂಗಳುಗಳಲ್ಲಿ) ಬಿತ್ತನೆ ಆರಂಭಿಸುತ್ತಾರೆ. ಬೀಜ ಬಿತ್ತುವ ಮೊದಲು, ಭೂಮಿಯನ್ನು ಚೆನ್ನಾಗಿ ಉತ್ತು, ಹದ ಮಾಡಿ ದನದ ಗೊಬ್ಬರ ಹಾಕುತ್ತಾರೆ. ಬಿತ್ತಿದ 4-5 ದಿನಗಳಲ್ಲಿ ಬೀಜಗಳು ಮೊಳಕೆಯೊಡೆಯುತ್ತವೆ. ಆಗಿಂದಾಗ್ಗೆ ಲಘುವಾಗಿ ನೀರು ಹಾಯಿಸಿ, ಕಳೆ ಕಿತ್ತು, ಪೈರು ಚೆನ್ನಾಗಿ ಬೆಳೆಯುವಂತೆ ನೋಡಿಕೊಳ್ಳುತ್ತಾರೆ. ಎರಡು ತಿಂಗಳಲ್ಲಿ ಗಿಡಗಳು ಹೂಬಿಡಲು ಪ್ರಾರಂಭಿಸಿ, ಫೆಬ್ರವರಿ, ಮಾರ್ಚ್ ಹೊತ್ತಿಗೆ ಫಸಲು ಬರುತ್ತದೆ. ಗಿಡಗಳನ್ನು ಬೇರು ಸಹಿತ ಕಿತ್ತು, ಚಾಪೆಗಳ ಮೇಲೆ ಹರಡಿ, ಬಿಸಿಲಿನಲ್ಲಿ ಒಣಗಿಸುತ್ತಾರೆ. ಆಮೇಲೆ ಕೈಯಿಂದ ಉಜ್ಜಿಯೊ ಕಾಲಿನಿಂದ ತುಳಿದೊ ಬೀಜಗಳನ್ನು ಬೇರ್ಪಡಿಸುತ್ತಾರೆ. ಸಾಮಾನ್ಯವಾಗಿ ಎಕರೆಗೆ 90-140 ಕಿಗ್ರಾಂ ಇಳುವರಿಯಾಗುತ್ತದೆ.

ಬೀಜಗಳಲ್ಲಿ ಒಂದು ಬಗೆಯ ತೈಲವಿರುತ್ತದೆ. ಬೀಜಗಳ ವಿಶಿಷ್ಟ ವಾಸನೆ ಮತ್ತು ರುಚಿಗೆ ಇದೇ ಕಾರಣ. ಈ ತೈಲದಲ್ಲಿ ಸುಮಾರು ಶೇ. 50 ಭಾಗ ಥೈಮಾಲ್ ಎಂಬ ವಸ್ತುವಿರುತ್ತದೆ. ಬೀಜವನ್ನು ಪಚನಕಾರಿಯಾಗಿಯೂ ಉತ್ತೇಜಕವಾಗಿಯೂ ಬಳಸುತ್ತಾರೆ. ಅಜೀರ್ಣ, ಭೇದಿ, ಹೊಟ್ಟೆಶೂಲೆ ಮುಂತಾದ ಪಚನಾಂಗ ಸಂಬಂಧಿ ಕಾಯಿಲೆಗಳಿಗೆ ಇದು ತುಂಬ ಒಳ್ಳೆಯ ಔಷಧಿ. ಬೀಜಗಳನ್ನು ನೀರಿನೊಂದಿಗೆ ಕುದಿಸಿ, ಬಟ್ಟಿಯಿಳಿಸಿ ತಯಾರಿಸಿದ ಓಮು ನೀರನ್ನು ಕಾಲರಾ ಬೇನೆಯ ಪ್ರಥಮ ಹಂತಗಳಲ್ಲಿ ವಾಂತಿ, ಭೇದಿ ನಿಲ್ಲಿಸಲು ಉಪಯೋಗಿಸುತ್ತಾರೆ. ಶೀತ, ನೆಗಡಿಯಾಗಿದ್ದಾಗ ಬೀಜಗಳನ್ನು ಉಜ್ಜಿ ಅದರ ವಾಸನೆಯನ್ನು ಸೇವಿಸುವುದೂ ಉಂಟು. ಆಹಾರ ಪಚನಕ್ರಿಯೆಯಲ್ಲಿ ಸಹಕಾರಿಯಾಗಲು ಉಪಯೋಗಿಸುವ ಹಿಂಗ್ವಾಷ್ಟಕ ಚೂರ್ಣದಲ್ಲಿ ಓಮು ಪ್ರಮುಖವಾಗಿರುತ್ತದೆ. ಅಲ್ಲದೆ, ಓಮನ್ನು ತಾಂಬೂಲದೊಂದಿಗೂ ಉಪಯೋಗಿಸುತ್ತಾರೆ. ಓಮಿನ ಪುಡಿಯನ್ನು ಕಾರಸೇವು, ಓಮುಪುಡಿ ಮೊದಲಾದ ಖಾದ್ಯ ವಸ್ತುಗಳಿಗೆ ರುಚಿಕಟ್ಟಲು ಬಳಸುತ್ತಾರೆ.	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ